ಯಕ್ಷಮಂದಾರ - 29 | ಹಾಲಾಡಿ ಸತೀಶ | Satheesh Halady | ಮಂದಾರ್ತಿ ಮೇಳದ ಹಾಸ್ಯಗಾರರು | ಜೀವನಗಾಥೆ | ಹಾಸ್ಯಾಭಿನಯ |

Sdílet
Vložit
  • čas přidán 4. 10. 2020
  • #ಯಕ್ಷಮಂದಾರ,#ಹಾಲಾಡಿ ಸತೀಶ,#Satheesh Halady
    🌀ಯಕ್ಷ💥ಮಂದಾರ🌀
    ಇದು ಯಕ್ಷ ಕಲಾವಿದರ ಸಾಧನೆ ಮತ್ತು ಜೀವನಗಾಥೆಯ ಅನಾವರಣ..
    ಇಂದಿನ ನಮ್ಮ ಯಕ್ಷಸಾಧಕರು..ಬಡಗುತಿಟ್ಟಿನ ಬಯಲಾಟ ಮೇಳಗಳಲ್ಲಿ ತನ್ನ ವಿಶಿಷ್ಟ ಶೈಲಿಯ ಪ್ರಬುದ್ಧ ಹಾಸ್ಯಾಭಿನಯದಿಂದ ಅತಿ ಕಿರಿಯ ವಯಸ್ಸಿನಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಪ್ರಧಾನ ಹಾಸ್ಯ ಕಲಾವಿದರಾದ ಸತೀಶ ಮೊಗವೀರ ಹಾಲಾಡಿ..
    ಇವರು ಹಾಲಾಡಿ ಹಾರ್ರಮಕ್ಕಿ ಕೃಷ್ಣ ಮೊಗವೀರ ಮತ್ತು ಗಂಗಾ ಇವರ ನಾಲ್ಕು ಜನ ಮಕ್ಕಳಲ್ಲಿ ಕಿರಿಯ ಮಗನಾಗಿ ದಿನಾಂಕ:10.07.1984ರಲ್ಲಿ ಜನಿಸಿದರು
    ಹಾಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೆಯ ತರಗತಿಯವರೆಗಿನ ವಿದ್ಯಾಬ್ಯಾಸವನ್ನು ಮುಗಿಸಿದ ಇವರು ಪ್ರೌಢ ಶಿಕ್ಷಣವನ್ನು ಪಡೆಯಲು ಹಾಲಾಡಿ ಸರಕಾರಿ ಹೈಸ್ಕೂಲನ್ನು ಸೇರಿದರು...ಅಲ್ಲಿ ಎಂಟನೆಯ ತರಗತಿಯಲ್ಲಿ ಅನುತೀರ್ಣರಾದ ಇವರು,ತನ್ನ ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿ,ಇವರ ಅಣ್ಣನಾದ ದಿನೇಶ್ ಅವರು ನಡೆಸುತ್ತಿದ್ದ ಹಾಲಾಡಿ ಮೇಳದ ಕ್ಯಾ0ಟಿನ್ ಸೇರಿಕೊಂಡರು...ಅಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತ ಆಸಕ್ತಿ ಬೆಳಸಿಕೊಂಡಿದ್ದ ಇವರು ಅಣ್ಣ ದಿನೇಶ್ ಮತ್ತು ಕಲಾವಿದರಾದ ವಂಡಾರು ಗೋವಿಂದ ಮತ್ತು ನಾಗರಾಜ ಅವರ ಸಲಹೆಯಂತೆ ಹಾಲಾಡಿ ಮೇಳದಲ್ಲಿ ಗೆಜ್ಜೆಕಟ್ಟಿ, ಕೊಡಂಗಿ ವೇಷದಾರಿಯಾಗಿ ಸೇರ್ಪಡೆಗೊಂಡರು...
    ಇವರ ತಂದೆ ಹಾಲಾಡಿ ಕೃಷ್ಣ ಅವರು ಆ ಕಾಲದಲ್ಲಿ ಪ್ರಸಿದ್ಧ ಪುಂಡು ವೇಷಧಾರಿಯಾಗಿ ಗುರುತಿಸಿಕೊಂಡವರು...ಮನೆಯಲ್ಲಿ ಯಕ್ಷಗಾನದ ಪೂರಕ ವಾತಾವರಣ ಇದ್ದುದರಿಂದ,ತಂದೆಯವರು ತನ್ನ ಶಿಷ್ಯರಿಗೆ ಯಕ್ಷಗಾನ ತರಬೇತಿ ನೀಡುವುದನ್ನು ನೋಡುತ್ತ ಬೆಳೆದ ಇವರು ತಿರುಗಾಟದಲ್ಲಿ ಹಿರಿಯ ಕಲಾವಿದರ ಒಡನಾಟದಲ್ಲಿ, ಯಕ್ಷಗಾನದ ಹೆಜ್ಜೆಗಾರಿಕೆ, ವೇಷಗಾರಿಕೆಯನ್ನು ನೋಡುತ್ತ, ಆಸಕ್ತಿಯಿಂದ ಕರಗತಮಾಡಿಕೊಳ್ಳುತ್ತ ಯಕ್ಷಗಾನ ರಂಗದಲ್ಲಿ ಗುರುವಿಲ್ಲದೆ ಕಲಿತ ಏಕಲವ್ಯನಂತೆ ಬೆಳೆದು ನಿಂತರು... ಇವರು ಸರಿಯಾದ ತಾಳ ಜ್ಞಾನವನ್ನು ಪಡೆಯದಿದ್ದರೂ ಲಯಜ್ಞಾನದಲ್ಲಿಯೇ ಕುಣಿದು ಪಾತ್ರಕ್ಕೆ ನ್ಯಾಯ ಒದಗಿಸಬಲ್ಲವರು.... ಹಾಲಾಡಿ ಮೇಳದಲ್ಲಿ ಒಂದು ವರ್ಷ ಸೇವೆಸಲ್ಲಿಸಿ,ಸೌಕೂರು ಮೇಳವನ್ನು ಸೇರಿದ ಇವರು,ಅಲ್ಲಿ ಎರಡು ವರ್ಷ ಸೇವೆಸಲ್ಲಿಸಿ ನಂತರ ಪುನಃ ಹಾಲಾಡಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಮರಳಿ ಬಂದರು...ಹೀಗೆ ಸಣ್ಣಪುಟ್ಟ ವೇಷವನ್ನು ಮಾಡುತ್ತ,ಅನಿವಾರ್ಯ ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ಹಾಸ್ಯ ಪಾತ್ರವನ್ನು ಮಾಡುತ್ತಿದ್ದ ಇವರು,ಮೇಳದ ಪ್ರಧಾನ ಹಾಸ್ಯಗಾರರಾಗಿದ್ದ ಕ್ಯಾದಗೆ ಮಹಾಬಲೇಶ್ವರ ಭಟ್ಟರು ವಠಾರ ಧಾರಾವಾಹಿಯ ಚಿತ್ರೀಕರಣಕ್ಕೆ ಹೋದಾಗ,ಅವರು ನಿರ್ವಹಿಸುತ್ತಿದ್ದ ನಾಗಮಣಿ ಚಂದ್ರಿಕಾ ಪ್ರಸಂಗದ ಕಾಂಚನ ಎನ್ನುವ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡರು...ಮಹಾಬಲೇಶ್ವರ ಭಟ್ಟರು ಮೇಳ ಬಿಟ್ಟ ನಂತರ ಹಾಲಾಡಿ ಮೇಳದ ಪ್ರಧಾನ ಹಾಸ್ಯಗಾರರಾಗಿ ಆಯ್ಕೆಯಾದರು....ಹತ್ತು ವರ್ಷಗಳ ಕಾಲ ಹಾಲಾಡಿ ಮೇಳದಲ್ಲಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಆರು ವರ್ಷದಿಂದ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ...
    ಅತಿ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನ ಹಾಸ್ಯಗಾರನಾಗಿ ಗುರುತಿಸಿಕೊಂಡಿರುವ ಇವರು ಚಂದ್ರಾವಳಿ ವಿಲಾಸದ ಅತ್ತೆ,ಚಿತ್ರಾಕ್ಷಿ ಕಲ್ಯಾಣದ ಅಜ್ಜಿ,ಶಶಿಪ್ರಭಾ ಪರಿಣಯದ ದೂತಿ, ದೇವಿಮಹಾತ್ಮೆಯ ದೂತ,ಕವಿರತ್ನ ಕಾಳಿದಾಸದ ಕಾಳ,ಶ್ರೀನಿವಾಸ ಕಲ್ಯಾಣದ ಜೋಗಿದಾಸ,ಕನಕಾಂಗಿ ಕಲ್ಯಾಣದ ದೂತ,ಶನಿ ಮಹಾತ್ಮೆಯ ನಂದಿ ಶೆಟ್ಟಿ,ಶ್ವೇತಕುಮಾರ ಚರಿತ್ರೆಯ ಪ್ರೇತ,ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿ,ಕೃಷ್ಣವಿಜಯದ ವಿಜಯ,ಕೀಚಕ ವದೆಯ ವಿಜಯ ಮೊದಲಾದ ಹಾಸ್ಯಪಾತ್ರಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಲ್ಲ ನಿಪುಣ ಕಲಾವಿದರು.ಪುಂಡುವೇಷಗಳಾದ ದೇವಿಮಹಾತ್ಮೆಯ ಚಂಡ ಮುಂಡ, ರಾಮ ದರ್ಶನದ ಮೈಂದದ್ವಿವಿದ,ಅಭಿಮನ್ಯು ಕಾಳಗದ ದುಶ್ಶಾಸನ,ರೇಣುಕಾ ಮಹಾತ್ಮೆಯ ಪರಶುರಾಮ ಮೊದಲಾದ ವೀರೋಚಿತ ಪಾತ್ರಗಳ ಜೊತೆಗೆ,ಕನಕಾಂಗಿ ಕಲ್ಯಾಣದ ಕೃಷ್ಣನಂತಹ ಸೌಮ್ಯ ಪಾತ್ರಗಳನ್ನು ನಿರ್ವಹಿಸುತ್ತಿರುವ ಇವರು,ಶಶಿಪ್ರಭಾ ಪರಿಣಯದ ಕಮಲಗಂದಿನಿ,ಚಂದ್ರಾವಳಿ ವಿಲಾಸದ ಚಂದ್ರಾವಳಿ ಮೊದಲಾದ ಸ್ತ್ರೀಪಾತ್ರಗಳನ್ನು ನಿರ್ವಹಿಸಿ ಯಕ್ಷರಂಗದ ಸವ್ಯಸಾಚಿ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ....
    ದೈನಂದಿನ ಸಾಮಾಜಿಕ,ರಾಜಕೀಯದ ವಿದ್ಯಮಾನಗಳನ್ನು, ತನ್ನ ತಿಳಿಹಾಸ್ಯದ ಮೂಲಕ ಪ್ರಚುರಗೊಳಿಸಿ ರಂಗದಲ್ಲಿ ಹಾಸ್ಯಸುದೆಯನ್ನು ಹರಿಸಬಲ್ಲ ಇವರು..ರಂಗದಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಕಾಪಾಡಿಕೊಂಡಿದ್ದಾರೆ....
    ಇವರು ಹಾಲಾಡಿ ಮೇಳದಲ್ಲಿದ್ದಾಗ ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಹಾರಾಡಿ ಸರ್ವ ಗಾಣಿಗ,ಕಟ್ಟಿನಬೈಲು ಶಿವರಾಮ ಶೆಟ್ಟಿ, ಮಂಜುನಾಥ ಕೊಠಾರಿ ನಾಯ್ಕನಕಟ್ಟೆ,ಹೊಳೆಕೊಪ್ಪ ಜಯಾನಂದ,ಸೌಕೂರು ಮೇಳದಲ್ಲಿ ಕೊಡಿ ವಿಶ್ವನಾಥ ಗಾಣಿಗ ಮತ್ತು ಮಂದಾರ್ತಿ ಮೇಳದಲ್ಲಿ ಹಾಸ್ಯಗಾರ ಆವರ್ಶೆ ಚಂದ್ರ ಕುಲಾಲರು ನೀಡಿದ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನವನ್ನು ಮುಕ್ತಮನಸ್ಸಿನಿಂದ ಸ್ಮರಿಸುವ ಇವರು,ಬಡಗುತಿಟ್ಟಿನ ಅನೇಕ ಹಿರಿಯ ಕಲಾವಿದರೊಂದಿಗೆ ತಿರುಗಾಟವನ್ನು ನಡೆಸಿ,ಅಪಾರವಾದ ಅನುಭವವನ್ನು ಪಡೆದಿದ್ದಾರೆ...
    ಅತ್ಯಂತ ಶಿಸ್ತು ಮತ್ತು ವಿಶಿಷ್ಟ ಹಾಸ್ಯ ಶೈಲಿಯಿಂದ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಇವರು ಹಾಲಾಡಿ ಗಣೇಶೋತ್ಸವ ಸಮಿತಿಯ ವತಿಯಿಂದ ಕಲಾಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹುಟ್ಟೂರ ಸನ್ಮಾನವನ್ನು ಸ್ವೀಕರಿಸಿದ್ದಾರೆ.. ಅಲ್ಲದೆ ಮುಂಬೈ ಮತ್ತು ಆನಂದಪುರ ಸೇರಿದಂತೆ ಹಲವು ಕಡೆ ಸನ್ಮಾನಗೊಂಡಿದ್ದಾರೆ...
    ಶ್ರೀಮತಿ ಜ್ಯೋತಿಯವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ,ಚೈತನ್ಯ ಎಂಬ ಮುದ್ದುಮಗಳನ್ನು ಪಡೆದಿರುವ ಇವರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ..
    ಇವರ ಮುಂದಿನ ವೈಯುಕ್ತಿಕ ಬದುಕು ಮತ್ತು ಕಲಾಜೀವನ ಸುಗಮವಾಗಿ ಸಾಗಲಿ...ಹಲವು ಪ್ರಶಸ್ತಿ, ಪುರಸ್ಕಾರ ಗಳು ಇವರ ಮುಡಿಗೇರಲಿ ಎಂದು ಹಾರೈಸುತ್ತ,ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಮರಳುಚಿಕ್ಕು ದೇವಿಯೂ ಇವರ ಬಾಳಿನಲ್ಲಿ ಬೆಳಕು ನೀಡಲಿ ಎನ್ನುವುದು ಯಕ್ಷಮಂದಾರದ ಶುಭಹಾರೈಕೆ..
    ಸಾಹಿತ್ಯ:ಹಾಲಾಡಿ ಸಂತೋಷ ಶೆಟ್ಟಿ...
    ನಿರೂಪಣೆ:ಶ್ರೀಮತಿ ಅಮೃತಾ ಶೆಟ್ಟಿ..
    ಮಾಹಿತಿ:ಸಂದೇಶ ಶೆಟ್ಟಿ,ಪತ್ರಕರ್ತರು ಆರ್ಡಿ..
    ವಿಡಿಯೋ:ಶರತ್ ಶೆಟ್ಟಿ ಜಂಬೂರು...
    ವಾಹಿನಿಯ ಹೋಮ್ ಪೇಜ್ ಗಾಗಿ: czcams.com/channels/srL.html...
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / 27334
  • Zábava

Komentáře • 2